ಮೋಸಸ್
ಇಸ್ರೇಲ್ ಜನತೆಯ ಧಾರ್ಮಿಕ ನಾಯಕ; ಪ್ರವಾದಿ, ಯಹೊದಿ, ಕ್ರೈಸ್ತ ಹಾಗೂ ಇಸ್ಲಾಮ್ ಧರ್ಮಗಳಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರನಾದವ. ಸಿನೈ ಪರ್ವತದ (ಹೊರೆಬ್) ಮೇಲೆ ದೇವರಾದ ಯಾಹ್ವೆ ಜೊತೆ ಇಸ್ರೇಲಿಗಳು ಮಾಡಿಕೊಂಡ ಒಪ್ಪಂದದ ಮಧ್ಯವರ್ತಿ.

ಬೈಬಲಿನ ಮೊದಲ ಐದು ಗ್ರಂಥಗಳಲ್ಲಿ (ವಿಶೇಷವಾಗಿ ವಿಮೋಚನಾಕಾಂಡದಲ್ಲಿ) ಮೋಸಸನ ಬಗೆಗೆ ವಿವರಗಳು ಐತಿಹ್ಯಗಳ, ಮೌಖಿಕ ಹಾಗೂ ಲಿಖಿತ ಸಂಪ್ರದಾಯಕಗಳ, ಚಾರಿತ್ರಿ ಅಂಶಗಳ ಬೆರಕೆಯಾಗಿದ್ದರೂ ಇವನೊಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದ ಎಂಬುದನ್ನು ವಿದ್ವಾಂಸರು ಒಪ್ಪುತ್ತಾರೆ. ಇವನು ಹುಟ್ಟಿದ್ದು ಕ್ರಿ.ಪೂ.ಸು. 14ನೆಯ ಶತಮಾನದಲ್ಲಿ, ಮೋಸಸನ ಜನನವಾದಾಗ ಯಹೂದಿಗಳು ಈಜಿಪ್ಟಿನಲ್ಲಿ ಸೆರೆಯಾಳುಗಳಾಗಿ ಗುಲಾಮರಂತೆ ದುಡಿಯುತ್ತಿದ್ದರು. ಗುಲಾಮ ಜನಾಂಗದಲ್ಲಿ ಗಂಡುಮಕ್ಕಳು ಇರಬಾರದೆಂಬ ಹಾಗೂ ಹುಟ್ಟಿದ ಯಹೂದಿ ಗಂಡು ಕೂಸುಗಳನ್ನೆಲ್ಲ ಕೊಲ್ಲಬೇಕೆಂಬ ರಾಜಶಾಸನವಿತ್ತು. ಇಂಥ ಹೊತ್ತಿನಲ್ಲಿ ಮೋಸಸನ ಯಹೂದಿ ದಂಪತಿಗಳ ಮಗನಾಗಿ ಜನಿಸಿದ. ಮಗುವನ್ನು ಮೂರು ತಿಂಗಳ ಕಾಲ ಸಾಕಿ, ರಾಜಶಾಸನದಿಂದ ಉಪಾಯವಾಗಿ ರಕ್ಷಿಸಿ, ಈಜಿಪ್ಟಿನ ರಾಜಕುಮಾರಿಯ ಕಣ್ಣಿಗೆ ಮಗು ಬೀಳುವಂತೆ ಮಾಡಿದವಳು ಮೋಸಸನ ತಾಯಿ, ಆಕೆ ಮಗುವನ್ನು ಬುಟ್ಟಿಯೊಂದರಲ್ಲಿ ಮುಚ್ಚಿಟ್ಟು ನೈಲ್‍ನದಿಯಲ್ಲಿ ಅದನ್ನು ತೇಲಿ ಬಿಟ್ಟಳು. ನೀರಿನಲ್ಲಿ ತೇಲುತ್ತಿದ್ದ ಬುಟ್ಟಿಯಿಂದ ಮಗುವನ್ನು ಎತ್ತಿಕೊಂಡ ರಾಜಪುತ್ರಿ ಅದನ್ನು ಸ್ವಂತ ಮಗನಂತೆ ಸಾಕಬೇಕೆಂದುಕೊಂಡು, ಪಾಲನೆಪೋಷಣೆಗೆ ಹೀಬ್ರು ಹೆಂಗಸೊಬ್ಬಳ್ಳನ್ನು ನೇಮಿಸಬೇಕೆಂದಿರುವಾಗ ಮೋಸಸನು ರಾಜಕುಮಾರಿಯ ಸಾಕುಮಗನಾಗಿ ಈಜಿಪ್ಟಿಗೆ ರಾಜಾಸ್ಥಾನದಲ್ಲಿ ಬೆಳೆದು ಸಕಲ ವಿದ್ಯಾ ಸಂಪನ್ನನಾದ.

ಒಮ್ಮೆ ಹೀಬ್ರು ಗುಲಾಮನೊಬ್ಬನನ್ನು ಹಿಂಸಿಸುತ್ತಿದ್ದ ಈಜಿಪ್ಟಿನ ಒಬ್ಬ ಮೇಲ್ವಿಚಾರಕನನ್ನು ಮೋಸಸ್ ತಡೆಯಲು ಹೋಗಿ ಕೊಂದುಬಿಟ್ಟ. ಅನಂತರದ ಪರಿಣಾಮಗಳಿಗೆ ಅಂಜಿ ಮೀಡಿಯನ್ ಪ್ರದೇಶಕ್ಕೆ ಓಡಿ ಹೋದ. ಅಲ್ಲಿ ಪುರೋಹಿತ ಜೆತ್ರೊವಿನ ಮನೆಯಲ್ಲಿಯೇ ನೆಲಸಿದ. ಅನಂತರ ಅವನ ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ಸೆಪ್ಪುರಾ ಎಂಬಳನ್ನು ಮದುವೆಯಾದ. ಇಬ್ಬರಿಗೆ ಇಬ್ಬರು ಮಕ್ಕಳಾದರು.

ಇಸ್ರೇಲಿಯರನ್ನು ವಿಮೋಚನೆಗೊಳಿಸಿದವನು ಹಾಗೂ ದೇವರ ಹತ್ತು ಕಟ್ಟಳೆಗಳನ್ನು ಇಸ್ರೇಲಿಯರಿಗೆ ತಂದು ಕೊಟ್ಟವನು ಮೋಸಸ್, ಸೈನ್ಯ ಪರ್ವತದ ಬಳಿ ಜ್ವಾಲಾವೃತವಾದರೂ ಸುಟ್ಟು ಹೋಗದ ಒಂದು ಪೊದೆಯನ್ನು ಪರೀಕ್ಷಿಸಲು ಹೋದಾಗ ಅದು ಪವಿತ್ರಕ್ಷೇತ್ರವೆಂದು ದೇವರೇ ಮೋಸಸ್‍ಗೆ ತಿಳಿಸಿದ. ಅಂದು ಆರಂಭವಾದ ದೇವರ ಸಂಬಂಧ-ಸಂಪರ್ಕ ಮೋಸಸನ ಸಾವಿನವರೆಗೆ ಮುಂದುವರಿಯಿತು. ಇಸ್ರೇಲಿಯರು ಈಜಿಪ್ಟಿನಲ್ಲಿ ಕಷ್ಟಪಡುತ್ತಿರುವುದನ್ನು ತಪ್ಪಿಸಿ ಅವರನ್ನು ವಿಮೋಚನೆಗೊಳಿಸಲು ದೇವರು ಮೋಸಸನನ್ನು ನಿಯಮಿಸಿದ. ಈ ಕಾರ್ಯಕ್ಕೆ ತನ್ನ ಶಕ್ತಿ ಸಾಲದೆಂದು ಹಿಂಜಿರಿದ ಈತನಿಗೆ ಏರೋನ್ ಎಂಬವನು ಸಹಾಯವನ್ನು ಪವಾಡಗಳನ್ನು ಮಾಡುವ ಶಕ್ತಿಯನ್ನು ದೇವರು ಕೊಟ್ಟ. ಈಜಿಪ್ಟಗೆ ಹಿಂದಿರುಗಿ ಬಂದು ಇಸ್ರೇಲಿಯರನ್ನು ಬಂಧಮುಕ್ತಗೊಳಿಸುವಂತೆ ಫೇರೊರನ್ನು ಕೋರಿದ. ಎಷ್ಟು ಬೇಡಿಕೊಂಡರೂ ಉಪಯೋಗವಾಗದಾಗ ಅನೇಕ ಪವಾಡಗಳನ್ನು ಮೆರೆದು ಕಠಿಣ ಮಾರಿಗಳನ್ನು (ಪ್ಲೇಗ್) ಈಜಿಪ್ಟಿನ ಮೇಲೆ ತರಿಸಿದ. ಕಡೆಯ ಮಾರಿಯಲ್ಲಿ ರಾಜನ ಮೊದಲನೆಯ ಮಗ ಮತ್ತು ಈಜಿಪ್ಟಿಯನ್ನರ ಮೊದಲ ಗಂಡುಸಂತಾನ ನಾಶವಾದಾಗ ಫೇರೋ ದೊರೆ ಇಸ್ರೇಲಿಯರನ್ನು ಬಂಧ ಮುಕ್ತಗೊಳಿಸಲು ಒಪ್ಪಿಕೊಂಡ. ಆದರೆ ದೊರೆ ಮತ್ತೆ ಮನಸ್ಸು ಬದಲಾಯಿಸಿ ಅವರನ್ನು ಹೋಗಲು ಬಿಡಬಾರದೆಂದುಕೊಂಡು ಸೈನ್ಯವನ್ನು ಬೆನ್ನಟ್ಟಿ ಕಳುಹಿಸಿದ. ಆದರೆ ಆ ವೇಳೆಗಾಗಲೇ ಮೋಸಸನ ನೇತೃತ್ವದಲ್ಲಿ ಕೆಂಪು ಸಮುದ್ರದ ಮೂಲಕ ಯಹೂದಿಗಳೆಲ್ಲ ಪಾರಾದರು. ಈಜಿಪ್ಟ ಸೈನ್ಯ ಮಾತ್ರ ನೀರುಪಾಲಾಯಿತು. ಅನಂತರ ಸೈನ್ಯ ಪರ್ವತವನ್ನು ಸೇರಿ ಇಸ್ರೇಲ್ ಜನತೆ ದೇವರಾದ ಯಾಹ್ವೆಯೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದ ದಶಾಜ್ಞೆಗಳಲ್ಲೂ ಒಡಂಬಡಿಕೆಯ ಗ್ರಂಥದಲ್ಲೂ (ವಿಮೋಚನಾಕಾಂಡ 20:1-17:21-23 ದಾಖಲಾಗಿದೆ. ಇಸ್ರೇಲಿಗೆ ಕೇನಾನ್ ನಾಡನ್ನು ಕೊಡುವೆನೆಂದು ದೇವರು ವಾಗ್ದಾನಮಾಡಿದ್ದ. ವಾಗ್ದಾನವಾಗಿದ್ದ ಈ ನಾಡು ತಲುಪುವ ಮೊದಲು ಮರುಭೂಮಿಯಲ್ಲಿ ಪರ್ಯಟನ ಮಾಡುತ್ತಿರುವಾಗ ಪ್ರಾಪ್ತವಾದ ಸಂಕಷ್ಟಗಳನ್ನೆಲ್ಲ ಮೋಸಸನು ಇಸ್ರೇಲಿಯರಿಗೆ ಮಾರ್ಗದರ್ಶಕವಾಗಿ ನಿಂತು ಅವರನ್ನು ರಕ್ಷಿಸಿದ ಕೊನೆಗೆ ವಾಗ್ದಾನವಾಗಿದ್ದ ನಾಡಿನ ಪರ್ಯಂತ ಅವರನ್ನು ಕರೆತಂದ. ಇಷ್ಟಕ್ಕೆ ಮೋಸಸನ ಕರ್ತವ್ಯ ನೆರವೇರಿತು. ಕೇನಾನ್ ನಾಡನ್ನು ಅವನು ಪ್ರವೇಶಿಸಲಿಲ್ಲ. ನೀಬೊ ಪರ್ವತದ ಬಳಿ ಮೋಸಸ್ ಕೊನೆಯುಸಿರೆಳೆದ.

ದಶಾಜ್ಞೆಗಳನ್ನಲ್ಲದೆ, ಬೈಬಲಿನ ಮೊದಲ ಐದು ಗ್ರಂಥಗಳ ಕರ್ತೃತ್ವವನ್ನು ಮೋಸಸನ ಹೆಸರಿಗೇ ಆರೋಪಿಸಲಾಗಿದೆ. ಕೆಲವು ಉಲ್ಲೇಖಗಳೂ ಇದನ್ನು ಭಾಗಶಃ ಸಮರ್ಥಿಸುತ್ತವೆ (ವಿವೇಚನಾಕಾಂಡ 24:4, ಇತ್ಯಾದಿ), ಇಸ್ರೇಲಿಯರ ಜೀವನ ರೀತಿಯನ್ನು ಸರ್ವಸಮರ್ಪಕವಾಗಿ ನಿಯಂತ್ರಿಸಲು ಈ ದಶಾಜ್ಞೆಗಳು ಸಾಲದಾದವು. ಇವುಗಳು ಸೇರಿದಂತೆ ಹಲವು ವಿಧಿ ವಿಧಾನಗಳನ್ನು ನಿಯಮಗಳನ್ನು ಒಡಂಬಡಿಕೆಯ ಗ್ರಂಥ ಒಳಗೊಳ್ಳುತ್ತದೆ. ಈ ಗ್ರಂಥವನ್ನು ಮೋಸಸ್ ಬರೆದ ಎಂದು ಸಂಪ್ರದಾಯ ನಂಬಿದೆ. ಬೈಬಲಿನ ಮೊದಲ ಐದು ಗ್ರಂಥಗಳ ಬಗೆಗೆ ಸಿಗುವ ಬೌಹ್ಯ ಉಲ್ಲೇಖಗಳಲ್ಲಿ ಮೋಸಸನ ಪ್ರಸ್ತಾಪವಿಲ್ಲ. ಇವುಗಳ ಅನಂತರ ಬೈಬಲಿನಲ್ಲಿ ಬರುವ ಪ್ರವಾದಿಗಳ ಗ್ರಂಥಗಳಲ್ಲೂ ಇವನ ಪ್ರಸ್ತಾಪ ಕಡಿಮೆ. ಇಸ್ರೇಲ್ ಜನತೆಯ ಏಳು ಬೀಳುಗಳಲ್ಲಿ ಯಹ್ವೆಯ ನೇರ ಹಸ್ತಕ್ಷೇಪವನ್ನೇ ಎತ್ತಿಹಿಡಿಯಬೇಕೆಂಬ ಇಸ್ರೇಲಿಯರ ಮನೋಭಾವ ಇದಕ್ಕೆ ಕಾರಣವಿರಬೇಕು. ಹೀಗಿದ್ದರೂ ಪ್ರಾಕೃತ ಸ್ಥಿತಿಯಲ್ಲಿದ್ದು ಚದುರ ಹೋಗಿದ್ದ ಯಹೊದಿಗಳನ್ನೆಲ್ಲ ಬುಡಕಟ್ಟಿನ ವ್ಯವಸ್ಥೆಯಲ್ಲಿ ಸೇರಿಸಿ. ಒಬ್ಬ ರಾಜನ ಕೈಕೆಳಗೆ ಒಂದು ರಾಷ್ಟ್ರವನ್ನಾಗಿ ಕಟ್ಟಿದವನು ಮೋಸಸ್, ಇಸ್ರೇಲಿಯರ ಚರಿತ್ರೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಲ್ಲಿ ಮೋಸಸನ ಜೀವನ ವೃತ್ತಾಂತವನ್ನು ಅರಿಯುವುದು ಅತಿಮುಖ್ಯವೆನಿಸುತ್ತದೆ.
(ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ